ಕಲ್ಯಾಣಕುಮಾರ್: ೧೯೩೬-೯೯. ಕನ್ನಡ ಜನಪ್ರಿಯ ಚಲನಚಿತ್ರ ನಟ, ನಿರ್ಮಾಪಕ, ನಿರ್ದೇಶಕ, ರಂಗಭೂಮಿ ಕಲಾವಿದ. ೧೯೩೬ ಜೂನ್ ೭ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ರಾಘವಾಚಾರ್ಯ, ತಾಯಿ ಕಲ್ಯಾಣಮ್ಮ. ಈ ದಂಪತಿಗಳಿಗೆ ಇವರು ಹನ್ನೊಂದನೆಯ ಮಗು. ವೆಂಕಟರಂಗನ್ ಇವರ ಹುಟ್ಟು ಹೆಸರು. ಎಲ್ಲರೂ ಕರೆಯುತ್ತಿದ್ದ ಹೆಸರು ಚೊಕ್ಕಣ್ಣ. ಚಿತ್ರರಂಗಕ್ಕೆ ಪ್ರವೇಶಿಸಿದಾಗ ತಾಯಿಯ ಮೇಲಿನ ಪ್ರೀತಿಯಿಂದ ತಮ್ಮ ಹೆಸರನ್ನು ಕಲ್ಯಾಣಕುಮಾರ್ ಎಂದು ಬದಲಾಯಿಸಿಕೊಂಡರು. ನ್ಯಾಷನಲ್ ಹೈಸ್ಕೂಲಿನಲ್ಲಿ ಎಸ್.ಎಸ್.ಎಲ್.ಸಿ. ವರೆಗೆ ಅಭ್ಯಾಸ ಮಾಡಿದರು. ಅನಂತರ ಎಸ್.ಜಿ.ಎಂ. ಪಾಲಿಟೆಕ್ನಿಕ್ ಸೇರಿದ ರಾದರೂ ಓದನ್ನು ಮುಂದು ವರಿಸಲಿಲ್ಲ. ತಂದೆ ಬಯಸಿದ್ದು ಮಗ ವೈದ್ಯ ಆಗಬೇಕೆಂದು, ಆದರೆ ಕಲ್ಯಾಣಕುಮಾರ್ ಆಯ್ಕೆ ಮಾಡಿಕೊಂಡದ್ದು ಸಿನಿಮಾರಂಗ.
ಬಾಲ್ಯದಿಂದಲೂ ಇವರಿಗೆ ಸಂಗೀತ, ನೃತ್ಯ, ಅಭಿನಯಗಳ ಕಡೆ ಆಸಕ್ತಿ. ಮೂರನೆಯ ವಯಸ್ಸಿನಲ್ಲಿಯೇ ಇವರು ರಂಗಪ್ರವೇಶಿಸಿದರು. ಅಣ್ಣಂದಿರೆಲ್ಲರೂ ವಿದ್ಯಾವಂತರಾಗಿ ಒಳ್ಳೆಯ ಕೆಲಸದಲ್ಲಿದ್ದರೂ ಕಲ್ಯಾಣ ಕುಮಾರ್ ಬೆಂಗಳೂರಿನಿಂದ ಮುಂಬಯಿಗೆ ರೈಲು ಹತ್ತಿ ತಮ್ಮ ಭವಿಷ್ಯವನ್ನು ಅರಸುತ್ತ ಹೊರಟರು. ಅಲ್ಲಿ ಏನೊಂದೂ ಪ್ರಯೋಜನ ವಾಗದಿದ್ದಾಗ ಮದರಾಸಿಗೆ ತೆರಳಿದರು (೧೯೫೩). ನಿರ್ದೇಶಕ ಸಿ.ವಿ.ರಾಜು ಇವರ ಪ್ರತಿಭೆಯನ್ನು ಗುರುತಿಸಿ ನಟಶೇಖರ ಚಿತ್ರದ ನಾಯಕ ನಟನನ್ನಾಗಿಸುವ ಮೂಲಕ ಚಿತ್ರರಂಗಕ್ಕೆ ತಂದರು (೧೯೫೪). ರಾಜಕುಮಾರ್ ಅವರೊಂದಿಗೆ ಅಭಿನಯಿಸಿದ ಮೊದಲ ಚಿತ್ರ ಓಹಿಲೇಶ್ವರ (೧೯೫೬). ಅನಂತರ ರಾಯರ ಸೊಸೆ, ದೇವಸುಂದರಿ, ಭೂಕೈಲಾಸ, ಅನ್ನಪೂರ್ಣ, ಗಾಳಿಗೋಪುರ, ಭೂದಾನ ಮೊದಲಾದ ಚಿತ್ರಗಳಲ್ಲಿ ಅಭಿನಯಿಸಿದರು. ಸದಾರಮೆ ಚಿತ್ರದ ಕಳ್ಳನ ಪಾತ್ರ ಇವರಿಗೆ ಜನಪ್ರಿಯತೆ ತಂದುಕೊಟ್ಟಿತು. ಕನ್ನಡದ ಮೊದಲ ವರ್ಣಚಿತ್ರ ಅಮರಶಿಲ್ಪಿ ಜಕಣಾಚಾರಿಯಲ್ಲಿ ಇವರು ನಾಯಕಪಾತ್ರ ವಹಿಸಿದರು. ಇವರು ಕೆಲವು ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿದರು. ಎಂದೂ ನಿನ್ನವನೇ (೧೯೬೪), ಕಲ್ಲುಸಕ್ಕರೆ (೧೯೬೬) ಚಿತ್ರ ತಯಾರಿಸಿದರು. ಆ ಕಾಲದಲ್ಲಿ ಸ್ಟುಡಿಯೋ ಇಲ್ಲದೆ ತಯಾರಿಸಿದ ಚಿತ್ರ ಪ್ರವಾಸಿ ಮಂದಿರ (೧೯೬೭). ಇವರು ೧೯೭೫-೭೬ರಲ್ಲಿ ಮನೆಮಡದಿಮಕ್ಕಳು ಚಿತ್ರ ತಯಾರಿಸಿದರು. ಇವರು ಅಭಿನಯಿಸಿದ ಮುತ್ತೈದೆ ಭಾಗ್ಯ, ಪ್ರೇಮದ ಪುತ್ರಿ, ವಿಜಯನಗರದ ವೀರಪುತ್ರ, ಅತಿಥಿ, ತಾಯಿಕರಳು, ಲಾಯರ ಮಗಳು, ಬಂಗಾರಿ -ಇವು ತುಂಬ ಯಶಸ್ಸು ಕಂಡ ಚಿತ್ರಗಳು. ದೈವಲೀಲೆ ಚಿತ್ರದಲ್ಲಿ ದ್ವಿಪಾತ್ರದಲ್ಲಿ ಅಭಿನಯಿಸಿದರು; ಪಾಪಪುಣ್ಯ (೧೯೭೧) ಚಿತ್ರದ ಬಳಿಕ ಕೆಲ ಕಾಲ ಚಿತ್ರರಂಗದಿಂದ ದೂರವಾಗಿದ್ದರು. ಪುಟ್ಟಣ್ಣ ಕಣಗಾಲ್ ಅವರ ಕಥಾಸಂಗಮ, ಕಾಲೇಜುರಂಗ; ರವಿ ಅವರ ತುಳಸಿ ಚಿತ್ರಗಳ ಮೂಲಕ ಮತ್ತೆ ಚಿತ್ರರಂಗಕ್ಕೆ ಹಿಂದಿರುಗಿದರು. ಲವ್ ಇನ್ ಬೆಂಗಳೂರು ಚಿತ್ರದ ಮೂಲಕ ನಾಯಕಿ ನಟಿ ಭಾರತಿಯವರನ್ನು ಚಿತ್ರರಂಗಕ್ಕೆ (೧೯೬೬) ಪರಿಚಯಿಸಿದರು. ಗಾಳಿಗೋಪುರ, ಮನೆ ಅಳಿಯ, ಮಾವನ ಮಗಳು, ಚಿನ್ನದ ಗೊಂಬೆ, ಬೆಳ್ಳಿಮೋಡ, ಬೆರೆತ ಜೀವ -ಇವು ಇವರ ಅಭಿನಯದ ಯಶಸ್ವಿ ಚಿತ್ರಗಳು. ಜಯಲಲಿತ, ಬಿ.ಸರೋಜದೇವಿ, ಕಲ್ಪನಾ -ಇವರೊಡನೆ ಅಭಿನಯಿಸಿದ ಜನಪ್ರಿಯ ಯಶಸ್ವಿ ನಾಯಕಿಯರು. ಇವರು ತಮಿಳು,ತೆಲುಗು, ಮಲೆಯಾಳಂ ಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ. ಇವರು ಅಭಿನಯಿಸಿದ ತಮಿಳು ಚಿತ್ರ ನೆಂಜಿಲ್ ಓರು ಆಲಯಂ ಅಪಾರ ಜನಮನ್ನಣೆ ಗಳಿಸಿತು. ಸರ್ಕಾರದಿಂದ ಪ್ರಶಸ್ತಿಯನ್ನೂ ಗಳಿಸಿತು. ಇವರು ಅಭಿನಯಿಸಿದ ಒಟ್ಟು ಚಿತ್ರಗಳು ೧೫೦ಕ್ಕೂ ಹೆಚ್ಚು.

ತಮ್ಮದೇ ಆದ ಕಲ್ಯಾಣ್ ಥಿಯೇಟರ್ಸ್‌ ಎಂಬ ನಾಟಕ ಸಂಸ್ಥೆ ಕಟ್ಟಿಕೊಂಡು ಇಡೀ ಕರ್ನಾಟಕದಲ್ಲಿ ಹಲವು ನಾಟಕಗಳನ್ನು ಪ್ರದರ್ಶಿಸಿದರು. ಸದಾರಮೆ, ಚಿಕ್ಕಮ್ಮ, ಚನ್ನ ನನ್ನ ಅಣ್ಣ, ರಾಮು ನನ್ನ ತಮ್ಮ, ರಾಮ್ ರಹೀಂ, ಮಂಗಳೂರು ಮಾವ- ಮುಂತಾದವು ಕೆಲವು ಉಲ್ಲೇಖನೀಯ ನಾಟಕಗಳು. ಇವಲ್ಲದೆ ಕೆಲವು ವೃತ್ತಿ ನಾಟಕ ಕಂಪನಿಗಳಿಂದ ಆಹ್ವಾನ ಬಂದಾಗ ಹೋಗಿ ಅಭಿನಯಿಸಿದ್ದೂ ಉಂಟು. ಕೆಲವು ಕಿರುತೆರೆ ಧಾರವಾಹಿಗಳನ್ನು ನಿರ್ಮಿಸಿ, ನಿರ್ದೇಶಿಸಿದರು ಹಾಗೂ ಅವುಗಳಲ್ಲಿ ನಟಿಸಿದರು. ಚಿತ್ರ ಕಲಾವಿದರ ಬದುಕಿಗೆ ನೆರವಾಗಬೇಕೆಂಬ ಉದ್ದೇಶದಿಂದ ಅಶಕ್ತ ಕಲಾವಿದರ ಕಲ್ಯಾಣ ಸಮಿತಿ ಸ್ಥಾಪಿಸಿ ಅದರ ಅಧ್ಯಕ್ಷರಾಗಿ ಮೂರುವರ್ಷ ಕಾಲ ದುಡಿದರು (೧೯೬೭-೭೦).

ಇವರಿಗೆ ಹಲವಾರು ಪ್ರಶಸ್ತಿಗಳು, ಗೌರವಗಳು ದೊರಕಿವೆ. ಅರುಣೋದಯ ಚಿತ್ರಕ್ಕೆ ಮದರಾಸು ಪಿsಲಂಫ್ಯಾನ್ ಪ್ರಶಸ್ತಿ ಲಭಿಸಿದೆ. ಮನೆ ಅಳಿಯ ಮತ್ತು ತಮಿಳಿನ ನೆಂಜಲ್ ಓರು ಆಲಯಂ ಚಿತ್ರಗಳಿಗೆ ರಾಷ್ಟ್ರ ಪ್ರಶಸ್ತಿ ದೊರೆತಿದೆ. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, (೧೯೯೨-೯೩), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳೂ ಇವರಿಗೆ ಬಂದಿವೆ. ಲಾವಣ್ಯ ಚಲನಚಿತ್ರ ಪತ್ರಿಕೆಯವರ ಲಾವಣ್ಯ ಪ್ರಶಸ್ತಿ ಲಭಿಸಿದೆ (೧೯೭೬). ಬೆಂಗಳೂರಿನ ಚಿತ್ರರಸಿಕರ ಸಂಘ ಪ್ರಶಸ್ತಿ ನೀಡಿ ಗೌರವಿಸಿದೆ. ವಿಜಯ ಕಲಾ ಮಂದಿರದವರು ಕಲಾರತ್ನ ಎಂಬ ಬಿರುದು ನೀಡಿ ಇವರನ್ನು ಗೌರವಿಸಿದ್ದಾರೆ. (೧೯೬೩-೬೪). ಇವರಿಗೆ ಆರ್.ಎನ್.ಜಯಗೋಪಾಲ್ ಸಂಸ್ಥೆ ‘ಕಲಾಪ್ರಪೂರ್ಣ’ (೧೯೬೫), ಉದಯ ಟಿ.ವಿ. ‘ಕಲಾಭೀಷ್ಮ’ (೧೯೯೮) ಎಂಬ ಬಿರುದು ನೀಡಿವೆ.

ಇವರು ಅಂದಿನ ಪ್ರಸಿದ್ಧ ತಾರೆ ರೇವತಿಯವರನ್ನು ಪ್ರೇಮಿಸಿ ವಿವಾಹವಾಗಿದ್ದರು. ಇವರಿಗೆ ಇಬ್ಬರು ಗಂಡುಮಕ್ಕಳು. ಇವರು ೧೯೯೯ ಆಗಸ್ಟ್‌ ೧ರಂದು ನಿಧನರಾದರು.   	(ಎಸ್.ಜಿ.ಪಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ